ಕುಂವರಸಿಂಹ, ಬಾಬೂ

 ಸು. 1777-1858. ಭಾರತದ 1857ರ ಸಂಗ್ರಾಮದ ವೀರ. ಬಿಹಾರದ ಜಗದೀಶಪುರ ಗ್ರಾಮದಲ್ಲಿ ಜನ್ಮವೆತ್ತಿದ. ಉತ್ತಮ ರಜಪೂತನಾದ ಈತನಿಗೆ ಬಾಲ್ಯದಲ್ಲಿಯೇ ಶಸ್ತ್ರಾಭ್ಯಾಸವಾಯಿತು. ಪಾರ್ಸಿ, ಹಿಂದೀ ಮತ್ತು ಸಂಸ್ಕøತಗಳ ಸಾಮಾನ್ಯ ಶಿಕ್ಷಣ ಈತನಿಗೆ ದೊರಕಿತ್ತು.

 ಕುಂವರಸಿಂಹನ ತಂದೆ ಬಾಬೂ ಸಾಹಬಜಾದಾಸಿಂಹ ಜಗದೀಶಪುರದ ಅಧಿಪತಿಯಾಗಿದ್ದ. ಶಾಹಜಹಾನನ ಕಾಲದಲ್ಲಿ ಈ ಮನೆತನಕ್ಕೆ ರಾಜಾ ಎಂಬ ಉಪಾಧಿ ದೊರಕಿತ್ತು. ಅಂದಿನಿಂದ ಈತ ಜಗದೀಶಪುರದ ರಾಜನಾದ. ಬಿಹಾರದ ಆರಾ ಜಿಲ್ಲೆಯ ಜಗದೀಶಪುರ, ಪೀರೋಪರಗಣಿ, ನೋನಾರ, ಆರಾ ಮತ್ತು ಬಾಹರ್‍ಗಾಂವ್ ಮೊದಲಾದ ಪ್ರದೇಶಗಳು ಈ ರಾಜ್ಯಕ್ಕೆ ಸೇರಿದ್ದುವು. ತಂದೆಯ ಮರಣದ ತರುವಾಯ (1830) ಕುಂವರಸಿಂಹ ಜಗದೀಶಪುರದ ಸಿಂಹಾಸನವನ್ನೀರಿದ. 1857ರ ಸಮರದ ಜ್ವಾಲೆ ರಾಷ್ಟ್ರವನ್ನೆಲ್ಲ ವ್ಯಾಪಿಸಿದಾಗ ಈತ ಸುಮಾರು 80 ವರ್ಷದ ಮುದುಕ. ಬಂಡಾಯದ ಸಮಯದಲ್ಲಿ ಪಾಟ್ನದ ಕಮಿಷನರ್ ಟೀಲರ್ ಕರೆದ ಎರಡು ಸಭೆಗಳಗೂ ಕುಂವರಸಿಂಹ ಹೋಗಲಿಲ್ಲವಾಗಿ, ಬ್ರಿಟಿಷರು ಇವನನ್ನು ವಿದ್ರೋಹಿಯೆಂದು ನಿರ್ಣಯಿಸಿದರು. ಕುಂವರಸಿಂಹ ಬಂಡಾಯ ಗುಂಪಿಗೆ ಸೇರಿದ. ಅಲ್ಲಿಂದ ಮುಂದೆ ಒಂದು ವರ್ಷಕಾಲ ಸತತವಾಗಿ ಬ್ರಿಟಿಷರ ಸೈನ್ಯಕ್ಕೆ ಕಂಟಕಪ್ರಾಯವಾಗಿ ಕಿರುಕುಳ ಕೊಡುತ್ತಿದ್ದ. ಬ್ರಿಟಿಷ್ ಸೇನೆ ಅನೇಕ ಬಾರಿ ಇವನನ್ನು ಎದುರಿಸಿ ಸೋಲುಗಳನ್ನು ಅನುಭವಿಸಿತು.

 ಕುಂವರಸಿಂಹ ಕಾನ್‍ಪುರದಲ್ಲಿ ತಾಂತಿಯಾಟೋಪೀ, ನಾನಾಸಾಹೇಬ ಮತ್ತು ಝಾನ್ಸಿ ಲಕ್ಷ್ಮೀಬಾಹಿಯರೊಂದಿಗೆ ಸೇರಿ, ಕ್ರಾಂತಿಯ ಯೋಜನೆ ತಯಾರಿಸಿದ. ಇದರಿಂದ ಕ್ರುದ್ಧರಾದ ಇಂಗ್ಲಿಷರು ಮೇಜರ್ ಆಯರನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದರು. ಬೀಬೀಗಂಜ್ ಬಳಿ ನಡೆದ ಘೋರ ಸಂಗ್ರಾಮದಲ್ಲಿ ಕುಂವರಸಿಂಹ ಪರಾಜಿತನಾಗಿ ಜಗದೀಶ್‍ಪುರವನ್ನು ಸೇರಿದ. ಇಂಗ್ಲಿಷರ ಸೇನೆ ಜಗದೀಶ್‍ಪುರವನ್ನೂ ಮುತ್ತಿತು. ಕುಂವರಸಿಂಹ ಅಲ್ಲಿಂದಲೂ ಪಲಾಯನ ಮಾಡಿದ. ಆದರೆ ಈತ ಎದೆಗುಂದಲಿಲ್ಲ. 1858ರ ಮಾರ್ಚಿ 18ರಂದು ಸುತ್ತಲಿನ ಕ್ರಾಂತಿಕಾರಿ ವೀರರನ್ನು ಸೇರಿಸಿಕೊಂಡು ಅಜಮಗಢದ ಹತ್ತಿರ ಅತರೌಲಿಯಾದಲ್ಲಿ ತಳ ಊರಿದ. ಇದನ್ನರಿತ ಇಂಗ್ಲಿಷರು ದೊಡ್ಡ ಸೈನ್ಯವನ್ನು ಕಳಿಸಿದರು. ಕುಂವರಸಿಂಹನಿಗೇ ಜಯವಾಯಿತು.

 ಈ ವಿಜಯ ದೊರೆತ ಮೇಲೆ ಲಖನೌದಿಂದ ಅನೇಕ ಕ್ರಾಂತಿವೀರರು ಬಂದು ಕುಂವರಸಿಂಹನ ಸೈನ್ಯವನ್ನು ಸೇರಿದರು. ಅನಂತರ ನಡೆದ ಅನೇಕ ಯುದ್ಧಗಳಲ್ಲೂ ಕುಂವರಸಿಂಹನೇ ಗೆದ್ದ. ಕಳೆದುಹೋದ ಜಗದೀಶ್‍ಪುರವನ್ನು ವಶಪಡಿಸಿಕೊಳ್ಳಲು ಈತ ಗಂಗಾನದಿಯನ್ನು ದಾಟುತ್ತಿದ್ದಾಗ ಶತ್ರುವಿನ ಗುಂಡು ಇವನ ಬಲಗೈ ಮಣಿ ಕಟ್ಟಿಗೆ ತಾಗಿತು. ಆಗ ಕುಂವರಸಿಂಹ ಎಡಗೈಹಿಂದ ಕತ್ತಿ ಹಿರಿದು, ಬಲಗೈಯನ್ನು ಕತ್ತರಿಸಿ ಗಂಗೆಗೆ ತನ್ನ ಕೊನೆಯ ಕಾಣಿಕೆಯಾಗಿ ಅರ್ಪಿಸಿದ. ಜಗದೀಶಪುರವನ್ನು ತಲುಪಿ ಅದನ್ನು ಇಂಗ್ಲಿಷರಿಂದ ಮತ್ತೆ ವಶಪಡಿಸಿಕೊಂಡ.

 ಪದೇಪದೇ ಪರಾಭವಗಳಿಗೆ ಒಳಗಾದ ಇಂಗ್ಲಿಷರು 1858ರಲ್ಲಿ ಲೀಗ್ರಂಡನ ನೇತೃತ್ವದಲ್ಲಿ ಸುಸಜ್ಜಿತವಾದ ಸೈನ್ಯವೊಂದನ್ನು ಕಳಿಸಿದರು. ಈ ಯುದ್ಧ 1857-59ರ ಅವಧಿಯ ಯುದ್ಧಗಳಲ್ಲೇ ಅತ್ಯಂತ ಘೋರವಾದ್ದು. ಆಗಲೂ ಇಂಗ್ಲಿಷರಿಗೆ ಭಾರಿ ಸೋಲಾಯಿತು. ಆದರೆ ಕುಂವರಸಿಂಹ ಯುದ್ಧದಲ್ಲಿ ಗಾಯಗೊಂಡು ಮರುದಿನ ಮರಣ ಹೊಂದಿದ.

 1966ರಲ್ಲಿ, ಕುಂವರ ಸಿಂಹನ ಕೊನೆಯ ವಿಜಯದ ವಾರ್ಷಿಕ ದಿನವಾದ ಏಪ್ರಿಲ್ 23 ರಂದು, ಭಾರತ ಸರ್ಕಾರ ಆ ದಿನದ ಸ್ಮಾರಕಾರ್ಥ ಅಂಚೆ ಚೀಟಿಯೊಂದನ್ನು ಹೊರಡಿಸಿತು.      

(ಆರ್.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ